ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಗ್ರಾಮೀಣ ಕಾಲೇಜಿಗೂ ಬಂತೂ ಆನ್‌ಲೈನ್ ಪರೀಕ್ಷೆ

ಗ್ರಾಮೀಣ ಕಾಲೇಜಿಗೂ ಬಂತೂ ಆನ್‌ಲೈನ್ ಪರೀಕ್ಷೆ

Tue, 24 Nov 2009 03:14:00  Office Staff   S.O. News Service
ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಈ ವಿಶ್ವವಿದ್ಯಾಲಯ ಹೊಸತನದ ಹಾದಿಯನ್ನು ತೋರಿಸುವ ವಿದ್ಯಾಕೇಂದ್ರ. ಶೈಕ್ಷಣಿಕ ಹಾದಿಯಲ್ಲಿ ೪೦ ವರ್ಷವನ್ನು ಪೂರೈಸಿರುವ ಉಜಿರೆ ಎಸ್‌ಡಿ‌ಎಂ ಕಾಲೇಜು ಸಾಧನೆಯ ಹಾದಿಯಲ್ಲಿ ಸದಾ ಮುಂದು.ಕ್ರೀಡೆ,ಸಾಹಿತ್ಯ,ಸಾಂಸ್ಕೃತಿಕತೆಯ ಸ್ಪರ್ಧಾಕೂಟಗಳಲ್ಲಿ ಈ ಕಾಲೇಜು ಮಾಡಿದ ಸಾಧನೆ ಅಪಾರ. ಸ್ವಾಯತ್ತತೆಯನ್ನು ಪಡೆದುಕೊಂಡಿರುವ ಈಗ ಈ ಕಾಲೇಜು ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಿದೆ. ನಾಕ್‌ನಿಂದ ಎ ಗ್ರೇಡ್ ಪಡೆದಿರುವ ಈ ಕಾಲೇಜು ಪದವಿ ತರಗತಿಗಳ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ಬರೆಯುವ ಕ್ರಮವನ್ನು ಹೊರತರುವ ಮೂಲಕ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಈ ಸಾಧನೆ ಮಾಡಿದ ಕಾಲೇಜು ಆಗಿದೆ.
ಸ್ವಾಯತ್ತತೆ ಪಡೆದುಕೊಂಡು ಮೂರು ವರ್ಷಗಳನ್ನು ಪೂರೈಸಿರುವ ಎಸ್‌ಡಿ‌ಎಂ ಶಿಕ್ಷಣ ಸಂಸ್ಥೆಯಲ್ಲಿಗ ಪೆನ್ನು,ಪೇಪರ್ ಮೂಲಕ ಪರೀಕ್ಷೆ ಬರೆಯುವ ಕಾಲ ಹೋಯಿತು.ಅದೇನಿದ್ದರೂ ಮುಂದೆ ಹಿಂದಿನ ನೆನಪನ್ನು ಮೆಲುಕು ಹಾಕುವುದಷ್ಕಕ್ಕೆ ಸೀಮಿತ. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಯಶೋವರ್ಮರು ಈ ಸಾಧನೆಯ ಹಿಂದಿರುವ ಪ್ರೇರಕ ಶಕ್ತಿ. ಸದಾ ಹೊಸತನದ ಹಾದಿಯನ್ನು,ಪ್ರಯೋಗಗಳನ್ನು ಮಾಡಲು ಶ್ರಮಿಸುವ ಯಶೋವರ್ಮರು ಈ ವಿಭಿನ್ನ, ವಿಶಿಷ್ಟವೆನಿಸುವ ಆನ್‌ಲೈನ್ ಪರೀಕ್ಷೆ ಎಂಬ ಪದ್ದತಿಯನ್ನು ಜಾರಿಗೆ ತಂದಿದ್ದಾರೆ.
ಇಂತಹ ಪದ್ದತಿ ಉನ್ನತವೆನಿಸಿರುವ ಕಂಪೆನಿಗಳಲ್ಲಿ ಸಂದರ್ಶನದ ಸಂದರ್ಭದಲ್ಲಿ ಜಾಸ್ತಿ ಬಳಸಲಾಗುತ್ತದೆ.ವಿದ್ಯಾರ್ಥಿಗಳಿಗೆ ಕೇವಲ ಪಾಠ ಪ್ರವಚನ ಅಷ್ಟೇ ಕಲಿಸಿದರೆ ಸಾಲದು.ಬದಲು ಅಂತರಾಷ್ಟ್ರಿಯ ಮಟ್ಟದಲ್ಲಿ ಸ್ಪರ್ಧಾತ್ಮಕತೆಯ ಎದುರು ನಮ್ಮ ವಿದ್ಯಾರ್ಥಿಗಳು ಗೆಲ್ಲಬೇಕೆಂದರೆ ಅವರಿಗೆ ಸ್ಪರ್ಧಾ ಮನೋಭಾವವನ್ನು ಕಲಿಸುವ ಇಂತಹ ನೂತನ ರೀತಿಯ ಪ್ರಯೋಗಗಳ ಮೂಲಕ ಪ್ರಬುದ್ಧರನ್ನಾಗಿಸುವುದು ನಮ್ಮ ಕರ್ತವ್ಯ ಎಂಬುದು ಇಲ್ಲಿನ ಪ್ರಾಂಶುಪಾಲರ ಜೊತೆಗೆ ಉಪನ್ಯಾಸಕರ ಅಭಿಪ್ರಾಯವಾಗಿದೆ.ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಆನ್‌ಲೈನ್ ಪರೀಕ್ಷೆಗಳಿರುವಾಗ ,ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇವೆಲ್ಲಾ ಮರೀಚಿಕೆಯಾಗಬಾರದೆಂಬ ನೆಲೆಯಲ್ಲಿ ಕಾಲೇಜು ಸದಾ ಹೊಸತನದ ಪ್ರಯೋಗಗಳನ್ನು ಮಾಡುತ್ತಿದೆ ಎನ್ನುತ್ತಾರೆ ಪ್ರಾಂಶುಪಾಲರು.
ಹೇಗಿರುತ್ತೆ ಆನ್‌ಲೈನ್ ಪರೀಕ್ಷೆ?
ಇಲ್ಲಿ ನಡೆದಿರುವ ಪ್ರಥಮ ಪ್ರಯೋಗಗಳ ಬಗ್ಗೆ ಎಲ್ಲರಿಗೂ ಕುತೂಹಲವಿದ್ದೇ ಇರುತ್ತದೆ. ಹೀಗಾಗಿ ಈ ಬಗ್ಗೆ ಕೊಂಚ ದೃಷ್ಟಿ ಹಾಯಿಸೋಣ.ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಾಗ ವಿದ್ಯಾರ್ಥಿಗಳಿಗೆ ಸವಾಲು ಎದುರಾಗುವುದು ಸಹಜ. ಇದುವರೆಗೆ ಆಂತರಿಕ ಪರೀಕ್ಷೆಗಳು ಆನ್‌ಲೈನ್ ಮೂಲಕ ನಡೆದಿಲ್ಲ.ಹೀಗಾಗಿ ಪ್ರಥಮ ಸಲ ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಲಾಗುತ್ತದೆ. ಇದು ಮೊದಲ ಪ್ರಯೋಗವಾದ ಕಾರಣ ಈ ವಿಧಾನ ವಿದ್ಯಾರ್ಥಿಗಳಿಗೆ ಹೊಸತಾದ್ದರಿಂದ ಇದೇ ಮಾದರಿಯ ಪರೀಕ್ಷೆಗಳನ್ನು ಮಾಡಲಾಗಿದೆ.ಈ ಮೂಲಕ ಮುಂದಿನ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಉದ್ದೇಶ ಯಶಸ್ವಿಯಾಗಿದೆ. ಗಣಿತ,ರಸಾಯನಶಾಸ್ತ್ರ, ಇತಿಹಾಸ, ವಿಜ್ಞಾನ, ರಾಜ್ಯಶಾಸ್ತ್ರ,ಭೌತಶಾಸ್ತ್ರ ಯಾವುದೇ ಪರೀಕ್ಷೆ ಇರಲಿ ಎಲ್ಲದರಲ್ಲಿ ಬಹು‌ಆಯ್ಕೆಯ ಪ್ರಶ್ನೆಗಳಿರುತ್ತವೆ.
ಒಟ್ಟು ೨೫ ಪ್ರಶ್ನೆಗಳಿಗೆ ೪೫ ನಿಮಿಷದ ಕಾಲಾವಧಿಯನ್ನು ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಯು ತನ್ನ ಕಂಪ್ಯೂಟರ್‌ನಲ್ಲಿ ನೋಂದಣಿ ಸಂಖ್ಯೆಯನ್ನು ,ಆಯಾ ಸಬ್ಜೆಕ್ಟ್ ಕೋಡ್ ನೀಡಿ ಪಾಸ್‌ವರ್ಡ್ ನೀಡಿದ ಬಳಿಕ ಕೆಲ ನಿಮಿಷಗಳಲ್ಲಿ ಆತನಿಗೆಂದೇ ಸಿದ್ದಗೊಂಡ ಪ್ರಶ್ನೆ ಪತ್ರಿಕೆ ಕಂಪ್ಯೂಟರ್ ತೆರೆ ಮೇಲೆ ಬರುತ್ತದೆ. ಆಗ ಕೌಂಟೌನ್ಡ್ ಪ್ರಾರಂಭವಾಗುತ್ತೆ. ಇಲ್ಲಿ ವಿದ್ಯಾರ್ಥಿಗಳು ಕೀಬೋರ್ಡನ್ನು ಬಳಸುವಂತಿಲ್ಲ. ಪ್ರಶ್ನೆ ಪತ್ರಿಕೆಗಳು ಸ್ಪರ್ಧಾತ್ಮಕ ಮಾದರಿಯಲ್ಲಿರುತ್ತದೆ. ಈ ಪ್ರಶ್ನೆಪತ್ರಿಕೆಗಳಲ್ಲಿ ನೀಡಲಾಗಿರುವ ಬಹು ಆಯ್ಕೆಯ ನಾಲ್ಕು ಪ್ರಶ್ನೆಗಳಲ್ಲಿ ಸರಿ ಉತ್ತರಕ್ಕೆ ಕ್ಲಿಕ್ ಮಾಡಬೇಕು. ಇಲ್ಲಿ ಸಾಮಾನ್ಯ ಜ್ಞಾನ,ಪುಸ್ತಕ ಜ್ಞಾನ ಮುಖ್ಯವಾಗುತ್ತದೆ. ಜೊತೆಗೆ ತರಗತಿಯಲ್ಲಿ ಏಕಾಗ್ರತೆಯಿಂದ ಪಾಠವನ್ನು ಆಲಿಸಿದ್ದರೆ ಇಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ಕ್ಲಿಕ್ ಮಾಡೋದು ಕಠಿಣವೆನಿಸಲಾರದು. ಉತ್ತರ ಕ್ಲಿಕ್ ಮಾಡಿದ ನಂತರ ಮತ್ತೆ ಆ ಉತ್ತರ ತಪ್ಪೂಂತ ಗೊತ್ತಾದರೆ , ಮತ್ತೊಮ್ಮೆ ಎಲ್ಲ ಉತ್ತರವನ್ನು ಕ್ಲಿಕ್ ಮಾಡಿದ ನಂತರ ಪರೀಕ್ಷಿಸಿ ಸೇವ್ ಕೊಟ್ಟಾರಾಯಿತು. ಹೀಗಾಗಿ ಈ ಮೂಲಕ ಹಲವು ಪರೀಕ್ಷೆಗಳನ್ನು ನಡೆಸಬಹುದು.
ಪರೀಕ್ಷೆಯೂ ಬೇಗ..ಫಲಿತಾಂಶವೂ ಬೇಗ...
ಎಲ್ಲ ಪ್ರಶ್ನೆಗಳಿಗೆ ಉತ್ತರ ಕ್ಲಿಕ್ ಮಾಡಿದ ನಂತರ ಸೇವ್ ಕೊಟ್ಟ ನಂತರ ಒಂದು ಸಂದೇಶವೊಂದು ಪರದೆ ಮೇಲೆ ಬರುತ್ತದೆ.ಇದಕ್ಕೆ ಓಕೆ ಅಂತ ಹೇಳಿದ್ರೆ ,ಆ ಕ್ಷಣದಲ್ಲಿ ವಿದ್ಯಾರ್ಥಿಯೊಬ್ಬ ಇಪ್ಪತ್ತೆದು ಪ್ರಶ್ನೆಗಳಿಗೆ ನೀಡಿದ ಉತ್ತರ ಎಷ್ಟು ಸರಿ ಎಂಬುದನ್ನು ತಿಳಿಸುತ್ತದೆ. ಮತ್ತೊಂದು ವಿಷಯ ಇದೆ.ಒಬ್ಬ ವಿದ್ಯಾರ್ಥಿ ಕಡಿಮೆ ಅಂಕ ಸಿಕ್ಕೆದೆ ಅಂತ ಒಮ್ಮೆ ಪರೀಕ್ಷೆ ಬರೆದ ನಂತರ ಅದೇ ವಿಷಯದಲ್ಲಿ ಪರೀಕ್ಷೆ ಬರೆಯಲು ಆಗಲ್ಲ. ಒಮ್ಮೆ ಬರೆದ ಪರೀಕ್ಷೆ ಸರ್ವರ್‌ನಲ್ಲಿ ಸೇವ್ ಆಗಿರುವ ಕಾರಣ ಬದಲಿಸಲು ಸಾಧ್ಯವಿಲ್ಲ.ಇಂತಹ ಪ್ರಯತ್ನ ಮಾಡಿದ್ರೆ ಅದೇ ಕ್ಷಣ ನೀವು ಪರೀಕ್ಷೆ ಬರೆದಿದ್ದೀರಿ ಅಂತ ಸಂದೇಶ ಬರುತ್ತದೆ ಎನ್ನುತ್ತಾರೆ ಪರೀಕ್ಷಾ ಸಮಿತಿಯ ಸದಸ್ಯರು. ಪ್ರತಿ ಕಂಪ್ಯೂಟರ್‌ನಲ್ಲಿ ಪ್ರಶ್ನೆಪತ್ರಿಕಗಳು ಒಂದೇ ತರಹ ಇದ್ದರೂ ಪ್ರಶ್ನೆ ಸಂಖ್ಯೆಗಳು ಬೇರೆ ಬೇರೆಯಾಗಿರುತ್ತವೆ.ಹೀಗಾಗಿ ನಕಲು ಅಸಾಧ್ಯ.
ಮಾತ್ರವಲ್ಲ, ಪರೀಕ್ಷಾ ಸಮಯ ೪೫ ನಿಮಿಷಗಳ ಮೊದಲು ಎಲ್ಲ ಉತ್ತರಕ್ಕೆ ಉತ್ತರ ಕ್ಲಿಕ್ ಮಾಡಿ ಸೇವ್ ಕೊಟ್ಟು ಮತ್ತೆ ಸಮಯವಿದೆಯೆಂದು ಹೇಳಿ ಮತ್ತೆ ಪುನ ಪರೀಕ್ಷಾ ಪ್ರಶ್ನೆಗಳಿಗೆ ಉತ್ತರ ಬರೆಯಲು ಆಗಲ್ಲ. ಪ್ರತಿ ಪರೀಕ್ಷೆಯ ನಂತರ ಒಟ್ಟಾಗಿ ವಿದ್ಯಾರ್ಥಿಗಳು ಪಡೆದ ಅಂಕಗಳು ಹಾಗೂ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಮುದ್ರಿತ ಪ್ರತಿ ದೊರೆಯುತ್ತದೆ.
ನಕಲಿ ಮಾಡಕ್ಕಾಗಲ್ಲ
ಗೈರು ಹಾಜರಾಗಿರುವ ವಿದ್ಯಾರ್ಥಿಯ ಪರವಾಗಿ ಮತ್ತೊಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯದಂತೆ ಕ್ರಮ ಕೈಗೊಳ್ಳಲಾಗಿದೆ.ಒಂದೇ ತರಗತಿಯ ವಿದ್ಯಾರ್ಥಿಗಳು ನಕಲಿ ಮಾಡಲು ಸಾಧ್ಯವಿಲ್ಲ.ಯಾಕೆಂದರೆ ಪ್ರಶ್ನೆ ಪತ್ರಿಕೆಗಳನ್ನು ನಾಲ್ಕು ಮಾದರಿಗಳಲ್ಲಿ ಮಾಡಲಾಗಿರುತ್ತದೆ.ಆರಂಭಿಕ ದಿನಗಳಲ್ಲಿ ಪರೀಕ್ಷೆಗೆ ಹಾಜರಾಗಿ ಎರಡು ನಿಮಿಷ ಮೊದಲು ಆತನ ಪರೀಕ್ಷಾ ಕೋಡ್ ಹೇಳಲಾಗುತ್ತದೆ. ಇದನ್ನು ಮುಂದೆ ಎಟಿ‌ಎಂ ಕೋಡ್ ಕೊಟ್ಟಂತೆ ಕಾಗದದೊಳಗೆ ನೀಡುವ ಯೋಚನೆ ಇದೆ. ಇದು ಪ್ರಾಂಶುಪಾಲ ಡಾ.ಬಿ.ಯಶೋವರ್ಮರ ಕನಸು.ನನಸು ಮಾಡಲು ಇವರ ಜೊತೆಗೆ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದವರು,ಸಾಫ್ಟ್‌ವೇರ್ ಡೆವೆಲಪಿಂಗ್ ವಿಭಾಗದವರು,ಉಪನ್ಯಾಸಕ ವೃಂದದವರು ಸಹಕರಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳೆಲ್ಲಾ ಕಂಪ್ಯೂಟರ್ ಮೂಲಕ ನಡೆಯುತ್ತಿರುವುದರಿಂದ್ದ , ನಮ್ಮ ವಿದ್ಯಾರ್ಥಿಗಳನ್ನು ಇಂತಹ ಪರೀಕ್ಷೆಗಳನ್ನು ಎದುರಿಸಲು ಸನ್ನದ್ದರಾಗಿಸಬೇಕೆಂಬ ಉದ್ದೇಶದಿಂದ ಆನ್‌ಲೈನ್ ಪರೀಕ್ಷೆಯನ್ನು ಪ್ರಾರಂಭಿಸಿದ್ದೇವೆಯೆಂದು ಹೇಳುತ್ತಾರೆ ಪ್ರಾಂಶುಪಾಲರು.
ಸಾಫ್‌ವೇರ್ ಡೆವಲಪಿಂಗ್ ಸೆಲ್‌ನವರು ಈ ಆಧುನಿಕ ಪರೀಕ್ಷಾ ಪದ್ದತಿಯ ತಂತ್ರಜ್ಞಾನವನ್ನು ಮಾಡಿದ್ದಾರೆ.ಹತ್ತು ಜನರ ತಂಡ ಒಂದು ತಿಂಗಳು ಮಾಡಿದ ಸತತ ಪ್ರಯತ್ನದಿಂದಾಗಿ ಈ ನೂತನ ಸಾಫ್ಟ್‌ವೇರ್ ಅನ್ನು ಮಾಡಿದೆ.ಆನ್‌ನೈನ್ ಪರೀಕ್ಷೆ ಸಾಫ್‌ಟವೇರ್ ರೂಪಿಸುವಾಗ ಇವರಿಗೆ ನಿಜವಾಗಿ ಪರೀಕ್ಷೆ ಬರೆದ ಅನುಭವವವಾಯಿತೆಂಬ ಅನುಭವವನ್ನು ಸಂತಸದಿಂದ ಹೇಳುತ್ತಾರೆ ಈ ವಿಭಾಗದವರು.ಹಲವು ಪ್ರಾಥಮಿಕ ತೊಂದರೆಗಳ ನಡುವೆ ಈ ನೂತನ ಪರೀಕ್ಷಾ ಪದ್ದತಿ ಜಾರಿಗೊಂಡಿದೆ.
ಕೊನೆ ಹನಿ
ಕಂಪ್ಯೂಟರ್ ಜ್ಞಾನವಿಲ್ಲದ ನಮಗೆ ಈ ಪದ್ದತಿ ಕಷ್ಟವಾಗುತ್ತಿದೆ ಎಂಬುದು ಕೆಲ ವಿದ್ಯಾರ್ಥಿಗಳ ಅಭಿಪ್ರಾಯ.ಇನ್ನು ಕೆಲವು ಕಲಾ ವಿಭಾಗದ ವಿದ್ಯಾರ್ಥಿಗಳು ಈ ನೂತನ ಪರೀಕ್ಷಾ ಪದ್ದತಿ ವಿಜ್ಞಾನ,ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸೂಕ್ತ.ಆದರೆ ಕಲಾ ವಿದ್ಯಾರ್ಥಿಗಳಾದ ನಮಗೆ ಇದು ಸೂಕ್ತವಲ್ಲವೆನ್ನುತ್ತಾರೆ ಕಾಲೇಜಿನ ಕಲಾವಿಭಾಗದ ವಿದ್ಯಾರ್ಥಿಗಳು. ಇಂತಹ ಪರ -ವಿರೋಧ ಅಭಿಪ್ರಾಯಗಳಿದ್ದು ಈ ಬಗ್ಗೆ ಪ್ರಾಂಶುಪಾಲರು ಚಿತ್ತ ಹಾಯಿಸಬೇಕಾಗಿದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹೊರಬಂದಿರುವ ಈ ನೂತನ ಪರೀಕ್ಷಾ ಪದ್ದತಿ ವಿದ್ಯಾರ್ಥಿಗಳಿಗೆ ಹಿತವನ್ನು ನೀಡಲೆಂಬುದೇ ಹಾರೈಕೆ. ಅಂತೂ ಗ್ರಾಮೀಣ ಕಾಲೇಜಿನಲ್ಲಿ ಈ ಸಾಧನೆ ಮಾಡಲು ಶ್ರಮಿಸಿದವರೆಲ್ಲರನ್ನು ಅಭಿನಂದಿಸಲೇಬೇಕು.
ಶಂಶೀರ್,ಬುಡೋಳಿ

Share: